ಜೊಲ್ಲು -
ಬಾಯಿಯನ್ನು ಒದ್ದೆಯಾಗಿಟ್ಟಿರುವ ದ್ರವ : ಜೊಲ್ಲಿನ ಗ್ರಂಥಿಗಳಿಂದ (ನೋಡಿ- ಜೊಲ್ಲಿನ-ಗ್ರಂಥಿಗಳು) ಬಾಯಿಯ ಒಳಕ್ಕೆ ಸ್ರವಿಸಲ್ಪಡುತ್ತದೆ (ಸಲೈವ). ಲಾಲಾರಸ ಪರ್ಯಾಯನಾಮ. ಇದು ವರ್ಣರಹಿತ ಅಲ್ಪಪಾರದರ್ಶಕ ದ್ರವ. ಸಾಂದ್ರತೆ 1,003. ಕಿಂಚಿತ್ ಪ್ರತ್ಯಾಮ್ಲೀಯ ಸ್ವಭಾವ ಉಳ್ಳದ್ದು. ಪೊಟ್ಯಾಷಿಯಮ್ ಮತ್ತು ಸೋಡಿಯಮ್ ಲವಣಗಳು ಮುಖ್ಯವಾಗಿ ಬೈಕಾರ್ಬೊನೇಟ್ , ಮ್ಯೂಸಿನ್ ಎಂಬ ಲೋಳೆಯುಕ್ತವಾದ ಪ್ರೋಟೀನ್, ಟೈಯಲಿನ್ ಎಂಬ ಕಿಣ್ವ ಪ್ರೋಟೀನ್-ವು ಜೊಲ್ಲಿನ ಮುಖ್ಯ ಘಟಕಗಳು. ಬಾಯಿಯ ಲೋಳೆ ಪೊರೆಯಲ್ಲಿ ಹುದುಗಿರುವ ಸಾವಿರಾರು; ಸಣ್ಣ ಗ್ರಂಥಿಗಳು ಅಲ್ಪ ಪ್ರಮಾಣದಲ್ಲಿ ಜೊಲ್ಲನ್ನು; ನಿರಂತರವಾಗಿ ಸ್ರವಿಸುತ್ತವೆ. ಇದರಿಂದ ಬಾಯಿ ಸದಾ ಒದ್ದೆಯಾಗಿರುತ್ತದೆ. ಈ ಕಾರಣದಿಂದ ನಮಗೆ ಮಾತಾಡುವುದು ಸಾಧ್ಯವಾಗುವುದು. ದೇಹದಲ್ಲಿ ದ್ರವಾಂಶ ಕಡಿಮೆ ಆದಾಗ ಬಾಯಿ ಒಣಗಿ ನೀರಡಿಕೆಯನ್ನು ಉಂಟು ಮಾಡುತ್ತದೆ. ವ್ಯಕ್ತಿ ಇದರಿಂದ ನೀರಿಗಾಗಿ ಹಾತೊರೆಯುವಂತಾಗಿ ನೀರನ್ನು ಸೇವಿಸುವಂಥ ಬಲವಂತ ಸಂದರ್ಭ ಉಂಟಾಗುವುದು. ವ್ಯಕ್ತಿ ಸಾಕಷ್ಟು ನೀರು ಸೇವಿಸಿ ದೇಹದಲ್ಲಿ ಕೊರತೆಯುಂಟಾದ ದ್ರವಾಂಶವನ್ನು ಪೂರೈಸಿಕೊಳ್ಳುವ ನೈಸರ್ಗಿಕ ಏರ್ಪಾಡು ಇದು. ಬಾಯಾರಿಕೆ ನೀರಡಿಕೆ ಎರಡೂ ಸಾಮಾನ್ಯವಾಗಿ ಪರ್ಯಾಯ ಪದಗಳಾದರೂ ಅವುಗಳ ನಡುವೆ ಒಂದು ಸೂಕ್ಷ್ಮ ಭೇದ ಉಂಟು : ನೀರಡಿಕೆ ಇಲ್ಲದೆ ಬಾಯಾರಿರಬಹುದು-ಅತಿಭೀತಿ, ತೀವ್ರ ಮಾನಸಿಕ ಧಕ್ಕೆ, ಅಟ್ರೋಷೀನ್ ಮುಂತಾದ ಕೆಲವು ಔಷಧಗಳ ಸೇವನೆಯಂಥ ಸಂದರ್ಭಗಳು.

	ಷೆರೋಟಿಡ್, ಸಬ್‍ಮ್ಯಾಕ್ಸಿಲ್ಲರಿ ಮತ್ತು ಸಬ್‍ಲಿಂಗ್ವಲ್ ಗ್ರಂಥಿಗಳಿಗೆ ಜೊಲ್ಲಿನ ದೊಡ್ಡ ಗ್ರಂಥಿಗಳೆಂದು ಹೆಸರು. (ನೋಡಿ- ಜೊಲ್ಲಿನ-ಗ್ರಂಥಿಗಳು) ಇವುಗಳಿಂದ ಜೊಲ್ಲು ಅಧಿಕ ಮೊತ್ತದಲ್ಲಿ ಸ್ರವಿಸುತ್ತದೆ. ಈ ಸ್ರವನ ನಿರ್ದಿಷ್ಟ ವೇಳೆಗಳಲ್ಲಿ ಮಾತ್ರ ಕಂಡುಬರುವುದು. ನರಪ್ರಚೋದನೆಯೇ ಇದರ ಕಾರಣ. ಪೆರೋಟಿಡ್ ಗ್ರಂಥಿಗಳ ಸ್ರಾವ ಬಹುನೀರಾದ ಆದರೆ ಕಿಣ್ವಯುತವಾದ ಜೊಲ್ಲು ಇದು ಲೋಳೆಯಾಗಿರುವುದಿಲ್ಲ. ಮಿಕ್ಕ ಎರಡು ಗ್ರಂಥಿಗಳ ಸ್ರಾವದಲ್ಲಿ ಕಿಣ್ವ ಮತ್ತು ಮ್ಯೂಸಿಸ್ ಎರಡೂ ಇದ್ದು ಈ ಜೊಲ್ಲು ಮಂದವಾಗಿ ಲೋಳೆಯಾಗಿ ಇರುತ್ತದೆ. ವಿವಿಧ ಸಂದರ್ಭಗಳಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಲೋಳೆ ಅಂಶ ಹೆಚ್ಚಾಗಿರುವ ಇಲ್ಲವೆ ಕಿಣ್ವ ಅಂಶ ಹೆಚ್ಚಾಗಿರುವ ಜೊಲ್ಲು ಅಗತ್ಯವಾದಷ್ಟು ಪ್ರಮಾಣದಲ್ಲಿ ಸ್ರಾವವಾಗುವುದು. ಅಗಿಯುವಾಗ ಒಣ ಆಹಾರ ಜೊಲ್ಲಿನೊಡನೆ ಸೇರಿ ತುತ್ತಾಗದ ಒಣತುಣುಕನ್ನು ನುಂಗಲು ಬಲುಕಷ್ಟ. ಆಗ ಅದನ್ನು ಉಗಿದು ಬಾಯನ್ನು ಶುದ್ಧ ಮಾಡಿಕೊಳ್ಳಲು ಅನುಕೂಲವಾಗುವಂತೆ ಅತಿ ತೆಳುವಾದ ಜೊಲ್ಲು ಅಧಿಕವಾಗಿ ಸ್ರಾವವಾಗುವುದು. ರುಚಿ ಪತ್ತೆ ಮಾಡುವಾಗಲೂ ಹೊಟ್ಟೆ ತೊಳಸುವಾಗಲೂ ಇದೇ ರೀತಿ ಜೊಲ್ಲಿನ ಸ್ರವನ ಅಧಿಕವಾಗಿರುತ್ತದೆ. ಈ ಕ್ರಮಗಳಿಂದ ದಿನಕ್ಕೆ ಪ್ರಾಯಶ: 1-1 1/2 ಲೀಟರುಗಳಷ್ಟು ಜೊಲ್ಲು ಸ್ರವಿಸಬಹುದು.

	ಪಚನಕಾರ್ಯದ ವಿವಿಧ ಹಂತಗಳಲ್ಲಿ ಆಹಾರದೊಡನೆ ಮಿಶ್ರವಾಗುವ ಪ್ರಥಮ ಜೀರ್ಣರಸ ಜೊಲ್ಲು. ಆಹಾರದಲ್ಲಿನ ಪಿಷ್ಟ ಜೊಲ್ಲಿನಲ್ಲಿರುವ ಟೈಯಲಿನ್ ಅಥವಾ ಅಮೈಲೇಸ್ ಎಂಬ ಕಿಣ್ವದಿಂದ ಮಾಲ್ಟ್ ಸಕ್ಕರೆಯಾಗಿ ಪರಿವರ್ತಿತವಾಗುತ್ತದೆ. ಈ ಕಾರ್ಯಕ್ಕೆ ಪ್ರತ್ಯಾಮ್ಲ ಮಾಧ್ಯಮ ಅಗತ್ಯ. ಜೊಲ್ಲಿನ ಸೋಡಿಯಮ್ ಬೈಕಾರ್ಬೊಹೈಡ್ರೇಟ್ ಅಂಶಗಳು ಜೊಲ್ಲಿನಿಂದ ಜೀರ್ಣವಾಗುವುದಿಲ್ಲ. ಜೊಲ್ಲಿನ ಪ್ರತ್ಯಾಮ್ಲೀಯತೆಯಿಂದ ಜಠರರಸದ ಆಮ್ಲತೆ ಕ್ಷೀಣಿಸುವಂಥ ಸೌಲಭ್ಯವೂ ಒದಗಿದಂತಾಗಿದೆ.

	ಜೊಲ್ಲಿನಲ್ಲಿ ವಿಷಾಣುನಿರೋಧಕ ವಸ್ತು ಉಂಟು. ಬಹುವಿಧ ವಿಷಾಣುಗಳ ಸೋಂಕಿಗೆ ನಿರಂತರವಾಗಿ ಒಡ್ಡಲ್ಪಟ್ಟಿರುವ ಬಾಯಿಗೆ ಇದು ತಕ್ಕಷ್ಟು ರಕ್ಷಣೆಯನ್ನು ಒದಗಿಸುವುದು. ಅನೇಕ ವೇಳೆ ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯೂ ಕಂಡುಬರುವುದುಂಟು. ಜೊಲ್ಲಿನಲ್ಲಿರುವ ವಿಷಾಣುಗಳು ಹುಳುಕು ಹಲ್ಲು (ಕೇರೀಸ್), ಕೀತವಸಡು (ಪಯೋರ್ಹಿಯಾ ಅಲ್ವಿಯೋಲ್ಯಾರಿನ್) ಮುಂತಾದವುಗಳಿಗೆ ಕಾರಣವಾಗುತ್ತದೆ. ಬಾಯಿಯಲ್ಲಿ ವ್ರಣವಾಗಿದ್ದರೆ ಅಲ್ಲಿ ವೃದ್ದಿಸುತ್ತಿರುವ ವಿಷಾಣುಗಳು ಜೊಲ್ಲಿನೊಡನೆ ಅಧಿಕ ಸಂಖ್ಯೆಯಲ್ಲಿ ಜಠರವನ್ನು ಸೇರಿ, ಅನೇಕ ಜೀರ್ಣಾಂಗರೋಗ ಸ್ಥಿತಿಗಳನ್ನು ಉಂಟುಮಾಡಬಹುದು. ನೆಗಡಿ, ಕೆಮ್ಮು, ಗಂಟಲು ನೋವು, ಕ್ಷಯ, ಡಿಫ್ತೀರಿಯ, ಸಿಫಿಲಿಸ್ ಇವುಗಳ ವಿಷಾಣುಗಳು ಆಯಾ ಸಂದರ್ಭಗಳಲ್ಲಿ ಜೊಲ್ಲಿನಲ್ಲಿ ಇರುವುದು ಸಾಮಾನ್ಯ. ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ ಈ ವಿಷಾಣುಗಳ ಪ್ರಸಾರವಾಗಿ ನೇರವ್ಯಕ್ತಿಗಳಿಗೆ ಸೋಂಕು ಹರಡಬಹುದು. ಹುಚ್ಚುನಾಯಿಯ ಉಗುಳಿನಲ್ಲಿ ನಾಯಿ ಹುಚ್ಚಿನ (ರೇಬೀಸ್) ವಿಷಾಣು ಇರುವುದಿರಂದ ಅದರ ಜೊಲ್ಲಿನ ಸಂಪರ್ಕ ಗಾಯಗೊಂಡ ಸ್ಥಳದಲ್ಲಿ ಉಂಟಾದರೆ ಸೋಂಕು ತಗಲಿ ಕಾಲಕ್ರಮದಲ್ಲಿ ನಾಯಿ ಹುಚ್ಚು ಕಂಡುಬರುತ್ತದೆ. 

	ಜೊಲ್ಲಿನ ಮೂಲಕ ಕೆಲವು ವಸ್ತುಗಳು ವಿಸರ್ಜಿತವಾಗಬಹುದು. ಹೊಗೆ ಸೊಪ್ಪು ಸೇವಿಸುವವರ ಜೊಲ್ಲಿನಲ್ಲಿ ಪೊಟ್ಯಾಷಿಯಮ್ ಥೈಯೋಸೈಯನೇಟ್ ವಿಸರ್ಜಿತವಾಗುವುದನ್ನು ಉದಾಹರಿಸಬಹುದು. ಪಾದರಸ ಸಂಯುಕ್ತಗಳು, ಸೀಸ ಸಂಯುಕ್ತಗಳು ಪೊಟ್ಯಾಸಿಯಮ್ ಅಯೊಡೈಡ್ ಇತ್ಯಾದಿಗಳೂ ಹೀಗೆ ವಿಸರ್ಜಿತವಾಗುವುದಕ್ಕೋಸ್ಕರ ಜೊಲ್ಲಿನ ಸ್ರವನವನ್ನು ಅಧಿಕಗೊಳಿಸುತ್ತವೆ ಎಂದು ತೋರುತ್ತದೆ. ಇನ್ನು ಕೆಲವು ಔಷಧಿಗಳು-ಸ್ಯಾಲಿಸಿಲಿಕ್ ಆಮ್ಲ, ಪೈರೊಕಾರ್ಪಿನ್ ಇತ್ಯಾದಿಗಳು ಜೊಲ್ಲನ್ನು ಅಧಿಕಗೊಳಿಸುತ್ತವೆ. ಬಾಯಲ್ಲಿ ಜೊಲ್ಲು ಅಧಿಕವಾಗಿ ಸುರಿಯುವುದಕ್ಕೆ ಇನ್ನೂ ಬೇರೆ ಕಾರಣಗಳುಂಟು. ಬಾಯಿ ಹುಣ್ಣು (ಸ್ವೋಮೆಟೈಟಿನ್), ಹುಳುಕು ಹಲ್ಲು, ಮುರಿದ ಹಲ್ಲಿನ ವಕ್ರತೆಯಿಂದ ಬಾಯಿಯಲ್ಲಿ ಗಾಯ, ಜಠರ ರೋಗಗಳು, ಗರ್ಭಾವಸ್ಥೆಯ ಪ್ರಾರಂಭ ಕಾಲ, ಕೆಲವು ವ್ಯಕ್ತಿಗಳಲ್ಲಿ ಪ್ರತಿಸಲ ಮುಟ್ಟಾದಾಗಲೂ-ಈ ಸಂದರ್ಭಗಳಲ್ಲೆಲ್ಲ ಜೊಲ್ಲಿನ ಸ್ರವನ ಅಧಿಕವಾಗುತ್ತದೆ. ಸ್ರವಿಸಿದ ಜೊಲ್ಲನ್ನು ನುಂಗಲಾಗದಿದ್ದರೆ ಅದು ಬಾಯಿಂದ ಹೊರಸುರಿಯುತ್ತದೆ. ಬಹುಶ: ಗಂಟಲುನೋವು, ಗದ್ದಕಟ್ಟು (ಮಮ್‍ಪ್ಸ್), ಕೆಳದವಡೆ ಉಳುಕು ಮುರುಕು, ವಾಯುನೋವು ಈ ಕಾರಣಗಳಿಂದ ನುಂಗುವುದಕ್ಕಾಗದಿರಬಹುದು. ಇಲ್ಲವೇ ಡಿಫ್ತೀರಿಯ, ಮುಳಸೆಟೆತ (ಷೇóಷಿಯಲ್ ಪ್ಯಾಲ್ಸಿ). ಮಯಸ್ಥೀನಿಯಗ್ರೇವಿಸ್ ಇಂಥ ರೋಗಗಳಲ್ಲಿ ಕಂಡುಬರುವಂತೆ ಸ್ನಾಯುಗಳ ಸ್ವಾಧೀನ ನಾಶದಿಂದ ಉಗುಳು ನುಂಗುವುದಕ್ಕಾಗದಿರಬಹುದು. ಪೆದ್ದರು, ಮಾನಸಿಕ ಬೆಳವಣಿಗೆ ಕಡಿಮೆ ಇರುವ ವ್ಯಕ್ತಿಗಳು ಇವರಲ್ಲೂ ಜೊಲ್ಲು ಬಾಯಿಯಿಂದ ಹೊರ ಸುರಿಯುತ್ತಿರುತ್ತದೆ. ಬಹುಶಃ ಉಗುಳನ್ನು ಪದೇಪದೇ ನುಂಗಿಕೊಂಡು ಅದು ಹೊರಸುರಿದು ಕೊಳೆ ಆಗದಂತೆ ಮಾಡಬೇಕು. ಶುಭ್ರವಾಗಿರಬೇಕು ಎನ್ನುವುದು ಇವರಿಗೆ ತಿಳಿಯದ್ದರಿಂದ ಹೀಗೆ ಎಂದು ತೋರುತ್ತದೆ.
(ಎಸ್.ಆರ್.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ